ನನ್ನ ಪ್ರೀತಿಯ ಅಣ್ಣ, ಶ್ರೀ. ಎಚ್. ಎಸ್. ರಾಮಚಂದ್ರರಾಯರು ಇನ್ನಿಲ್ಲ !

ಹೊಳಲ್ಕೆರೆಯ ಪ್ರೌಢಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನಕ್ಕೆ ಪಾದಾರ್ಪಣೆಮಾಡಿ, ಊರಿನ ವಿದ್ಯಾರ್ಥಿಗಳಿಗೆಲ್ಲಾ ರಾಷ್ಟ್ರಭಾಷೆ ಹಿಂದಿಯನ್ನು ಅತ್ಯಂತ ಕಾಳಜಿ ಹಾಗು ಪ್ರೀತಿಯಿಂದ ಕಲಿಸುತ್ತಾ ಬಂದು ಕೊನೆಯಲ್ಲಿ ಹೈಸ್ಕೂಲಿನ ಹೆಡ್ ಮಾಸ್ಟರ್ ಆಗಿ ನಿವೃತ್ತಿಹೊಂದಿದ ಹೊಳಲ್ಕೆರೆ ಸುಬ್ಬರಾಯರ ಎರಡನೆಯ ಪುತ್ರ, ಶ್ರೀ ರಾಮಚಂದ್ರರಾಯರು, ಏಪ್ರಿಲ್, ೧೨ ರ ಪ್ರಾಥಃಕಾಲ ತಮ್ಮ ಹಿರಿಯ ಮಗ ಡಾ.ಎಚ್.ಆರ್. ಶ್ರೀಪಾದನ ಮಂಡ್ಯದ ಮನೆಯಲ್ಲಿ ಕೊನೆಯುಸಿರೆಳೆದರು. ಶ್ರೀಯುತರು ಕೆಲಕಾಲದಿಂದ ಕಾಲಿನ ನೋವು ಹಾಗೂ ಇತರ ತೊಂದರೆಗಳಿಂದ ಬಳಲುತ್ತಿದ್ದರು. ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವ ಕಾಯಿಲೆ (ಜಲೋದರ) ದಿಂದ ಸ್ವಲ್ಪಕಾಲ ತೊಂದರೆ ಅನುಭವಿಸಿದರು. ಆದರೆ ಕೊನೆಯಲ್ಲಿ ಅವರು ಮರಣಿಸಿದ್ದು ಹೃದಯ ವೈಫಲ್ಯದಿಂದ.  ಊರಿನ ಜನರಿಗೆ ಅತ್ಯಂತ ಪ್ರೀತಿಯ ಹಿಂದಿ ಪಂಡಿತ್ ಎಚ್.ಎಸ್.ಆರ್. ಎಂಬಹೆಸರಿನಿಂದಲೇ ಪರಿಚಿತರಾಗಿದ್ದ ರಾಮಚಂದ್ರರಾಯರು, ಸದಾ ಹಸನ್ಮುಖಿ, ಹಾಸ್ಯಪ್ರಿಯರು, ಮತ್ತು ಸಹಾಯಮಾಡುವ ಮನೋಭಾವದವರು. ಸದಾ ಅಧ್ಯಯನ ಅವರ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಅವರ ಪತ್ನಿ, ಸೌ.ರಾಜೇಶ್ವರಿಯವರು ಒಂದು ವರ್ಷದ ಹಿಂದೆಯೇ ನಿಧನರಾಗಿದ್ದರು. ಶ್ರೀಯುತರಿಗೆ ಇಬ್ಬರು ಗಂಡುಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳು. ಎಲ್ಲರೂ ತಮ್ಮ ತಮ್ಮ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಚ್.ಎಸ್.ಆರ್, ಹೊಳಲ್ಕೆರೆಯ ಪ್ರಸನ್ನ ಗಣಪತಿಯ ಪರಮ ಭಕ್ತರು. ನನಗೆ ಮತ್ತು ನಮ್ಮ ಮನೆಯ ಎಲ್ಲರಿಗೂ ಹಿಂದಿಯನ್ನು ಹೇಳಿಕೊಟ್ಟ ಗುರುಗಳು ಅವರಾದರೆ, ನನಗೆ ಪ್ರೀತಿಯ ಅಣ್ಣನೂ ಹೌದು. ಹೊಳಲ್ಕೆರೆಯ ಊರಿನ ಜನರ ಪರವಾಗಿ ಮತ್ತು ನನ್ನ ವೈಯ್ಯಕ್ತಿಕವಾಗಿಯೂ ರಾಮಣ್ಣನವರ ಆತ್ಮಕ್ಕೆ ಶಾಂತಿ ಸಿಗಲೆಂದು ಮಾಳೇನಹಳ್ಳಿ ರಂಗನಾಥ ಸ್ವಾಮಿ, ಮತ್ತು ಹೊಳಲ್ಕೆರೆಯ ಪ್ರಸನ್ನ ಗಣಪತಿಯನ್ನು ಬೇಡುತ್ತೇನೆ.
ಎಚ್.ಎಸ್.ಆರ್ ರವರ ಜೊತೆಯಲ್ಲಿ ಕೆಲಸಮಾಡಿದ ಕೆಲವು ಸಹಯೋಗಿಗಳು, ಶ್ರೀ. ಜಿ. ಸೀತಾರಾಮಯ್ಯನವರು, ಶ್ರೀ. ಅನಂತರಾಮಯ್ಯ, ಶ್ರೀ.ಸುಬ್ಬರಾಯರು, ಶ್ರೀ.ಏಳುಕೋಟಿರಾವ್, ಶ್ರೀ.ಕಾಳಿಂಗಕೃಷ್ಣ, ಶ್ರೀ.ನರಸಿಂಹಮೂರ್ತಿ, ಶ್ರೀ. ಎನ್.ಡಿ.ಕೃಶ್ಣನ್, ಶ್ರೀ. ಸಚ್ಚಿದಾನಂದ ಮೂರ್ತಿ ಮೊದಲಾದವರು. ಹೊಳಲ್ಕೆರೆಯಲ್ಲಿ ಸಾಯಂಕಾಲ ಗಾಳಿಸಾಂಚಾರಕ್ಕೆ ಹೋಗುವಾಗ ಜೊತೆಯಲ್ಲಿ ಹೋಗುತ್ತಿದ್ದ ಗೆಳೆಯರು : ಶ್ರೀ. ಚಿನ್ನಪ್ಪನವರು, ಶ್ರೀ. ಕಾಟಲಿಂಗಪ್ಪನವರು, ಪೋಸ್ಟ್ ಮಾಸ್ಟರ್, ಶ್ರೀ. ರಾಮಕೃಷ್ಣರಾಯರು, (ಎಚ್.ಎಸ್.ಆರ್. ರವರ ಸೋದರ) ಮೊದಲಾದವರು. 

Comments

HSR was so simple but high thinker.

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !